College Code: P15GAP0063 | AISHE CODE: C58209

ಉದ್ಯೋಗಸ್ಥಳದಲ್ಲಿ ಒತ್ತಡ ನಿರ್ವಹಣೆಗೆ ಕಾರ್ಯಯೋಜನೆ ಮುಖ್ಯ ಸಾಧನ - ಶ್ರೀ ಎಂ ಎಸ್ ಸಂತೋಷ್

ಉದ್ಯೋಗಸ್ಥಳದಲ್ಲಿ ಒತ್ತಡ ನಿರ್ವಹಣೆಗೆ ಕಾರ್ಯಯೋಜನೆ ಮುಖ್ಯ ಸಾಧನ - ಶ್ರೀ ಎಂ ಎಸ್ ಸಂತೋಷ್
28 Feb 2026
Admin
110 Reads


ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಮನಃಶಾಸ್ತ್ರ ಹಾಗೂ ಸಮಾಜಕಾರ್ಯ ವಿಭಾಗವು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ವiತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ದಿನಾಂಕ ೧೦.೧೦.೨೦೨೪ ರಂದು ಆಯೋಜಿಸಿತ್ತು. ಈ ಪ್ರಯುಕ್ತ ಹಮ್ಮಿಕೊಂಡಿರುವ ಮಾನಸಿಕ ಆರೋಗ್ಯ ಅರಿವು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿದ ಗೌರವಾನ್ವಿತ ಹಿರಿಯ ಸಿವಿಲ್ ನ್ಯಾಯಾಧೀಶರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆಗಿರುವ ಮಾನ್ಯ ಎಂ ಎಸ್ ಸಂತೋಷ್‌ರವರು, ಉದ್ಯೋಗಸ್ಥಳದಲ್ಲಿ ಮಾನಸಿಕ ಒತ್ತಡ ನಿರ್ವಹಣೆಗೆ ಸರಿಯಾದ ಕಾರ್ಯಯೋಜನೆ ಹಾಗೂ ಕೆಲಸದ ಕುರಿತ ಪ್ರೀತಿ – ಇವೇ ಮುಖ್ಯ ಸೂತ್ರಗಳು ಎಂದರು. ಯಾವುದೇ ಉದ್ಯೋಗವು ನಮ್ಮಿಂದ ಬಯಸುವುದು ಔದ್ಯೋಗಿಕ ಕರ್ತವ್ಯ. ಈ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಲು ಯಾವುದೇ ಅಧಿಕಾರ ನಮ್ಮದಾಗಿದ್ದರೂ ಮಾನಸಿಕ ಆರೋಗ್ಯವೇ ಮುಖ್ಯ ಎಂದು ತಿಳಿಸಿದರು. ತಾನು ನ್ಯಾಯಾಧೀಶರಾದಂತಹ ಸಂದರ್ಭದಲ್ಲಿ ಬಾಕಿ ಉಳಿದಿದ್ದ ಪ್ರಕರಣಗಳನ್ನು ವಿಲೇವಾರಿ ಮಾಡಲು ರೂಪಿಸಿದ ಕಾರ್ಯಯೋಜನೆ, ಸಿಬ್ಬಂದಿಗಳ ಪರಸ್ಪರ ಸಹಕಾರ, ಕೆಲಸದ ಬದ್ದತೆಯನ್ನು ಉದಾಹರಣೆಗಳೊಂದಿಗೆ ವಿವರಿಸಿದರು. ಉದ್ಯೋಗ ಸ್ಥಳದಲ್ಲಿ ಪರಸ್ಪರ ಪ್ರೀತಿ, ವಿಶ್ವಾಸದಿಂದ ಒಂದು ವಿಸ್ತೃತ ಕುಟುಂಬದ ಸದಸ್ಯರಂತೆ ಕಾರ್ಯನಿರ್ವಹಿಸಿದಲ್ಲಿ ಮಾನಸಿಕ ಒತ್ತಡ ಕಡಿಮೆ ಮಾಡಬಹುದು ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಯೋಜನೆಗಳ ಅಧಿಕಾರಿಗಳು, ಸಿಬ್ಬಂದಿಗಳು ಭಾಗವಹಿಸಿದ ಈ ವಿಚಾರ ಸಂಕಿರಣದಲ್ಲಿ ಮಾನಸ ನರ್ಸಿಂಗ್ ಹೋಂನ ಹಿರಿಯ ಆಪ್ತಸಮಾಲೋಚಕರಾದ ಶ್ರೀ ಗಣೇಶ್ ರಾವ್ ನಾಡಿಗೇರ್‌ರವರು ‘ಉದ್ಯೋಗ ಸ್ಥಳದಲ್ಲಿ ಮಾನಸಿಕ ಆರೋಗ್ಯ’ ಎಂಬ ವಿಷಯದ ಕುರಿತು ಉಪನ್ಯಾಸ ಹಾಗೂ ಸಂವಾದ ನಡೆಸಿಕೊಟ್ಟರು. ದಿನದ ಹೆಚ್ಚಿನ ಸಮಯವನ್ನು ಉದ್ಯೋಗಸ್ಥರು ಕಳೆಯುವುದು ಉದ್ಯೋಗಸ್ಥಳದಲಿ.್ಲ ನಮ್ಮ ಮಾನಸಿಕ ನೆಮ್ಮದಿಗೆ ನಮ್ಮ ಉದ್ಯೋಗ ಕಾರಣವಾಗಬೇಕೆ ಹೊರತು ಉದ್ಯೋಗ ಸ್ಥಳ ಮಾನಸಿಕ ಅನಾರೋಗ್ಯ ಉಂಟಾಗಬಾರದು. ಆದುದರಿಂದ ನಮ್ಮ ಉದ್ಯೋಗದ ಕುರಿತು ನಮ್ಮ ಬದ್ಧತೆ, ಬದಲಾವಣೆಗೆ ಸರಿಯಾದ ಹೊಂದಾಣಿಕೆ, ಧನಾತ್ಮಕ ಮನೋಭಾವ, ಜವಾಬ್ದಾರಿ ಹಂಚಿಕೊಳ್ಳುವಿಕೆ ಹಾಗೂ ಸೂಕ್ತ ರೀತಿಯ ಉದ್ಯೋಗ ಜೀವನ ಸಮತೋಲನ ಕಾಯ್ದುಕೊಳ್ಳುವಿಕೆ ಇತ್ಯಾದಿ ಅಂಶಗಳು ಪ್ರತಿ ಉದ್ಯೋಗಸ್ಥನಿಗೆ ಆದ್ಯತೆಯಾಗಿರಬೇಕು ಎಂದರು. ವಿಭಿನ್ನ ವ್ಯಕ್ತಿತ್ವ, ವಿಭಿನ್ನ ಹಿನ್ನೆಲೆಯುಳ್ಳ ವ್ಯಕ್ತಿಗಳೊಂದಿಗೆ ಬೆರೆಯಲು ಅವಕಾಶ ಮಾಡುವ ನಮ್ಮ ಉದ್ಯೋಗ ಸ್ಥಳ ಎಲ್ಲರಿಗೂ ದೊಡ್ಡ ಜೀವನ ಪಾಠಶಾಲೆ ಎಂದು ವಿವಿಧ ಉದಾಹರಣೆಗಳೊಂದಿಗೆ ವಿವರಿಸಿದರು. ಸಹೋದ್ಯೋಗಿಗಳು ಪರಸ್ಪರ ಸಹಾನುಭೂತಿಯನ್ನು ಹೊಂದಿರಬೇಕಾದ ಔಚಿತ್ಯವನ್ನು ತಿಳಿಸಿದರು. ಉದ್ಯೋಗಸ್ಥರು ಕೆಲಸದ ಅವಧಿಯ ನಂತರ ತಮ್ಮ ಕುಟುಂಬದೊಂದಿಗೆ ಒಳ್ಳೆಯ ಸಮಯವನ್ನು ಕಳೆದಲ್ಲಿ ಮಾರನೆಯ ದಿನದ ಕೆಲಸಕ್ಕೆ ಬೇಕಾದ ಉತ್ಸಾಹ ದೊರೆಯುತ್ತದೆ ಎಂದರು. ಕುಟುಂಬ ಹಾಗೂ ಉದ್ಯೋಗ ಸ್ಥಳ ಎರಡೂ ಕಡೆ ಪುರುಷ ಹಾಗೂ ಸ್ತ್ರೀಯರ ಮಧ್ಯೆ ಸಮಾನತೆ ಇರಬೇಕು ಎಂದು ತಿಳಿಸಿದರು. ಕೆಲಸವು ಒತ್ತಡವಾಗದಂತೆ ಸೃಜನಾತ್ಮಕತೆ ಹಾಗೂ ಹೊಸ ಕಲಿಕೆಗೆ ಮುಕ್ತವಾಗಿರುವುದು ಮುಖ್ಯ ಎಂದು ವಿವರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಶ್ರೀ ಕೃಷ್ಣಪ್ಪರವರು ಉದ್ಯೋಗಸ್ಥಳದಲ್ಲಿ ಟೀಕೆ ಹಾಗೂ ಖುಣಾತ್ಮಕ ಮಾತುಗಳಿಗೆ ಗಮನಕೊಡಬೇಡಿ. ಉದ್ಯೋಗದಲ್ಲಿ ‘ಯಾರೂ ಮುಖ್ಯರಲ್ಲ, ಯಾರೂ ಅಮುಖ್ಯರಲ್ಲ’ ಎಂಬ ಕವಿವಾಣಿಯನ್ನು ನಾವು ನೆನಪಿಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಮನಃಶಾಸ್ತ್ರ ವಿಭಾಗದ ಸಂಯೋಜಕಿ, ಸಿಸ್ಟರ್ ಮಾರಿ ಇವ್ಲಿನ್, ಮುಖ್ಯಸ್ಥರಾದ ಡಾ ಅರ್ಚನಾಭಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ರೀಮತಿ ಶಶಿರೇಖಾ, ಶ್ರೀ ಕಿರಣ್, ಶ್ರೀ ಖಾನ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥ ಶ್ರೀ ಮಂಜುನಾಥಸ್ವಾಮಿ ಇಂದಿನಿಂದ ೭ ದಿನಗಳ ಕಾಲ ಮಾನಸಿಕ ಆರೋಗ್ಯ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ದಿನಾಂಕ ೧೬.೧೦.೨೦೨೪ ರಂದು ಆಶಾಕಾರ್ಯಕರ್ತರಿಗೆ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಪ್ರಾಂಶುಪಾಲರಾದ ಡಾ ಸಂಧ್ಯಾ ಕಾವೇರಿ ಅಧ್ಯಕ್ಷತೆ ವಹಿಸಿದ್ದರು. ಬಿ ಎಸ್ ಡಬ್ಲೂ ವಿದ್ಯಾರ್ಥಿಗಳು ಭಿತ್ತಿ ಚಿತ್ರವನ್ನು ಅನಾವರಣಗೊಳಿಸಿದರು. ಉಪನ್ಯಾಸಕಿ ಶ್ರೀಮತಿ ನ್ಯಾನ್ಸಿ ವಂದಿಸಿದರು. ಉಪನ್ಯಾಸಕ ಮಂಜುನಾಥ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾರ್ಥಿನಿ ಸ್ಪೂರ್ತಿ ನಿರೂಪಣೆಯನ್ನು ಮಾಡಿದರು. ಬಿ ಎಸ್ ಡಬ್ಲೂ ದ್ವಿತೀಯ ವರ್ಷದ ಮಂಜುಳಾ, ಜ್ಯೋತಿ ಹಾಗೂ ವಿಜಯಕುಮಾರಿ ಪ್ರಾರ್ಥನೆಯನ್ನು ಹಾಡಿದರು.

ಇದೇ ಕಾರ್ಯಕ್ರಮದ ಪ್ರಯುಕ್ತ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ‘ನನ್ನ ಸಂತೋಷ - ನನ್ನ ಭಾವಾಭಿವ್ಯಕ್ತಿ’ ಎಂಬ ವಿಷಯದ ಕುರಿತು ಘೋಷವಾಕ್ಯಗಳನ್ನು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಿತ್ತಿಚಿತ್ರದಲ್ಲಿ ಬರೆಯುವ ವಿಭಿನ್ನ ಕಾರ್ಯಕ್ರಮ ನಡೆಸಲಾಯಿತು.