College Code: P15GAP0063 | AISHE CODE: C58209

ನಿಮ್ಮ ಎರಡು ಕಣ್ಣುಗಳು ಇಬ್ಬರ ಬಾಳಿಗೆ ಬೆಳಕು ನೀಡಬಲ್ಲದು _ಡಾ. ಹೃಷಿಕೇಶ್ ಕುಲಕರ್ಣಿಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ

ನಿಮ್ಮ ಎರಡು ಕಣ್ಣುಗಳು ಇಬ್ಬರ ಬಾಳಿಗೆ ಬೆಳಕು ನೀಡಬಲ್ಲದು _ಡಾ. ಹೃಷಿಕೇಶ್ ಕುಲಕರ್ಣಿಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ
29 Aug 2026
Admin
416 Reads

ದಿನಾಂಕ 28 ಆಗಸ್ಟ್ 2026ರಂದು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ರೆಡ್ ಕ್ರಾಸ್ ಘಟಕದ ವತಿಯಿಂದ ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಹಾಗೂ ಕಟೀಲ್ ಅಶೋಕ್ ಪೈ ಸ್ಮಾರಕ ನರ್ಸಿಂಗ್ ಸಂಸ್ಥೆ ಸಹಯೋಗದೊಂದಿಗೆ ನೇತ್ರದಾನದ ಪ್ರಾಮುಖ್ಯತೆ ಕುರಿತು ಜಾಗೃತಿ ಕಾರ್ಯಕ್ರಮವನ್ನು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು.


ಶಂಕರ್ ಕಣ್ಣಿನ ಆಸ್ಪತ್ರೆಯ ಡಾ. ಪ್ರಜಕ್ತ ಪವಾರ್ ಹಾಗೂ ಡಾಕ್ಟರ್ ರಿಷಿಕೇಶ್ ಕುಲಕರ್ಣಿ ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು. ಡಾಕ್ಟರ್ ರಿಷಿಕೇಶ್ ಕುಲಕರ್ಣಿ ಅವರು ಕಣ್ಣುಗಳ ಮಹತ್ವ ,ಕಣ್ಣುಗಳ ರಚನೆ ಮತ್ತು ಕಾರ್ಯ ಇವುಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಕಾರ್ನಿಯಾ ಸಮಸ್ಯೆಯಿಂದಾಗಿ ದೃಷ್ಟಿ ಕಳೆದುಕೊಂಡವರಿಗೆ ,ಮರಣ ಹೊಂದಿದ ವ್ಯಕ್ತಿಗಳ ಕಾರ್ನಿಯಾವನ್ನು ಜೋಡಿಸಲು ಸಾಧ್ಯವಾಗುತ್ತದೆ. ಆದುದರಿಂದ ವ್ಯಕ್ತಿಯೊಬ್ಬ ಮರಣ ಹೊಂದಿದಾಗ ಅವರ ನೇತೃ ದಾನ ಮಾಡಲ್ಪಟ್ಟರೆ ಆ ಎರಡು ಕಣ್ಣುಗಳಿಂದ ಇಬ್ಬರು ವ್ಯಕ್ತಿಗಳ ದೃಷ್ಟಿಗೆ ಬೆಳಕು ನೀಡಬಹುದು ಎಂದು ಅವರು ತಿಳಿಸಿದರು.


ಕಾರ್ನಿಯಾ ತೊಂದರೆಗಳು ವಿವಿಧ ಕಾರಣಗಳಿಂದ ಉಂಟಾಗಬಹುದು .ಅಪಘಾತಗಳು, ಸೋಂಕುಗಳು ,ವಿಟಮಿನ್ ಎ ಕೊರತೆ ,ಇತ್ಯಾದಿ ಕಾರಣಗಳಿಂದ ಕಾರ್ನಿಯಾಗೆ ಹಾನಿಯಾಗಿ ದೃಷ್ಟಿ ದೋಷ ಅಥವಾ ದೃಷ್ಟಿ ಮಾoದ್ಯತೆ ಉಂಟಾಗಬಹುದು. ಇಂತಹ ವ್ಯಕ್ತಿಗಳಿಗೆ ನೇತ್ರಕಸಿಯ ಹೊರತು ಬೇರೆ ಯಾವುದೇ ಚಿಕಿತ್ಸೆ ಇಲ್ಲ .ಈಗ ದೇಶದಾದ್ಯಂತ 4.9 ಮಿಲಿಯನ್ ಜನರು ಕಾರ್ನಿಯಾ ದೋಷದಿಂದ ದೃಷ್ಟಿ ಕಳೆದುಕೊಂಡಿರುತ್ತಾರೆ. ಇವರೆಲ್ಲರಿಗೂ ಸೂಕ್ತ ಸಂದರ್ಭದಲ್ಲಿ ನೇತ್ರ ದಾನದಿಂದ ಕಾರ್ನಿಯಾ ಲಭ್ಯವಾದರೆ ಅವರಿಗೆ ದೃಷ್ಟಿ ಮತ್ತೆ ಬರಲು ಸಾಧ್ಯವಾಗುತ್ತದೆ.


 ವ್ಯಕ್ತಿಯೊಬ್ಬ ಮರಣ ಹೊಂದಿ ಆರು ಗಂಟೆಗಳ ಒಳಗೆ ಆ ವ್ಯಕ್ತಿಯ ಕಣ್ಣುಗಳನ್ನು ದಾನ ಪಡೆಯಲು ಅವಕಾಶವಿರುತ್ತದೆ ಎಂದು ಡಾಕ್ಟರ್ ಪ್ರಜಕ್ತ ಪವಾರ್ ತಿಳಿಸಿದರು. ಹೀಗೆ ಸಂಗ್ರಹಿಸಿದ ನೇತ್ರಗಳನ್ನು ಸೂಕ್ತ ದ್ರಾವಣಗಳಲ್ಲಿ ಶೇಖರಿಸಿಟ್ಟು ಅಗತ್ಯವುಳ್ಳ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಅಳವಡಿಸಲಾಗುವುದು. ಆದುದರಿಂದ ಮರಣ ಹೊಂದಿದ ವ್ಯಕ್ತಿಯ ದೇಹದೊಂದಿಗೆ ಕಣ್ಣುಗಳನ್ನು ಸುಟ್ಟು ಅಥವಾ ಮಣ್ಣಿನಲ್ಲಿ ಹೂತು ನಾವು ಹಾಳುಮಾಡಬಾರದು. ಬದಲಾಗಿ ನಾವು ಮರಣ ಹೊಂದುವ ಮೊದಲೇ ನಮ್ಮ ನೇತ್ರಗಳನ್ನು ದಾನ ಮಾಡುವ ಪ್ರತಿಜ್ಞೆಯನ್ನು ದಾಖಲಿಸಿದಲ್ಲಿ ಸಂಬಂಧಿಕರು ತಕ್ಷಣವೇ ಹತ್ತಿರದ ಕಣ್ಣು ಬ್ಯಾಂಕಿಗೆ ತಿಳಿಸುವ ಮೂಲಕ ಆ ಕಣ್ಣುಗಳನ್ನು ದಾನ ಮಾಡಲು ಅನುವು ಮಾಡಿಕೊಟ್ಟಂತಾಗುತ್ತದೆ .ನೇತ್ರದಾನವೆಂಬುದು ಒಂದು ಬಹಳ ಮುಖ್ಯವಾದ ಸಮಾಜ ಸೇವೆ .ಇಲ್ಲಿ ಯಾವುದೇ ಲಾಭಪೇಕ್ಷೆಯು ಇರುವುದಿಲ್ಲ .


ನಮ್ಮ ದೇಶದಲ್ಲಿ 500 ಕಣ್ಣು ಬ್ಯಾಂಕುಗಳು ಇವೆ. ಈ ಕಣ್ಣಿನ ಬ್ಯಾಂಕುಗಳ ಮೂಲಕವೇ ನೇತ್ರದಾನದ ಪ್ರಕ್ರಿಯೆಯು ನಡೆಯುತ್ತದೆ. ಆದುದರಿಂದ ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವಿತಾವಧಿಯಲ್ಲಿ ತನ್ನ ಕಣ್ಣುಗಳನ್ನು ದಾನಮಾಡುವ ಪ್ರತಿಜ್ಞೆಯನ್ನು ನೀಡಿದಲ್ಲಿ ಅದು ಬಹಳ ಮುಖ್ಯವಾದ ದಾನವೆಂದು ಗುರುತಿಸಲ್ಪಡುತ್ತದೆ ಎಂದು ಅವರು ತಿಳಿಸಿದರು.


ಈ ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು ತಮ್ಮ ಸಂಶಯಗಳನ್ನು ಪ್ರಶ್ನೆಗಳನ್ನು ತಜ್ಞರೊಂದಿಗೆ ಕೇಳಿ ಪರಿಹರಿಸಿಕೊಂಡರು .ತಜ್ಞರ ಅಭಿಪ್ರಾಯದಂತೆ ನೇತ್ರದಾನದಿಂದ ಯಾವುದೇ ವ್ಯಕ್ತಿಯ ದೇಹಕ್ಕಾಗಲಿ ಶರೀರಕ್ಕಾಗಲಿ ಮುಖದ ರೂಪಕ್ಕಾಗಲಿ ಯಾವುದೇ ಹಾನಿ ಆಗುವುದಿಲ್ಲ. ಅಲ್ಲದೆ ನೇತ್ರದಾನವನ್ನು ವ್ಯಕ್ತಿ ಜೀವದಿಂದ ಇರುವಾಗ ನಡೆಸಲು ಸಾಧ್ಯವಿಲ್ಲ .ಇನ್ನೊಬ್ಬ ವ್ಯಕ್ತಿಗೆ ಕಣ್ಣನ್ನು ನೀಡುವಾಗ ಈ ಕಣ್ಣು ಆ ವ್ಯಕ್ತಿಗೆ ಹೊಂದಿಕೆಯಾಗಬಲ್ಲದೆ ಎಂಬ ವಿಶೇಷವಾದ ಪರೀಕ್ಷೆಗಳು ಅಥವಾ ಪೂರ್ವಪರಗಳು ಅಗತ್ಯವಿಲ್ಲ .ಸೋಂಕು ರಹಿತನಾದ ಯಾವುದೇ ವ್ಯಕ್ತಿಯ ಕಣ್ಣನ್ನು ಅಂದರೆ ಕಾರ್ನಿಯಾವನ್ನು ಅಗತ್ಯವಿರುವ ಯಾವುದೇ ವ್ಯಕ್ತಿಗೆ ಶಸ್ತ್ರ ಚಿಕಿತ್ಸೆಯ ಮೂಲಕ ಅಳವಡಿಸಬಹುದಾಗಿದೆ ಎಂದು ಶಂಕರ್ ಆಸ್ಪತ್ರೆಯ ವೈದ್ಯರು ತಿಳಿಸಿದರು.


ಕಾರ್ಯಕ್ರಮದಲ್ಲಿ ಕಾಲೇಜಿನ ರೆಡ್ ಕ್ರಾಸಿನ ಕಾರ್ಯಕ್ರಮ ಅಧಿಕಾರಿ ಶ್ರೀ ಮಂಜುನಾಥ ಸ್ವಾಮಿ , ಐ ಕ್ಯೂ ಎ ಸಿ ಯ ಡಾಕ್ಟರ್ ಅರ್ಚನಾ ಹಾಗೂ ಪ್ರಾಂಶುಪಾಲರಾದ ಡಾಕ್ಟರ್ ಸಂಧ್ಯಾ ಕಾವೇರಿ ಉಪಸ್ಥಿತರಿದ್ದರು . ಕಾರ್ಯಕ್ರಮದ ಸಂಯೋಜನೆಯನ್ನು ಕಾಲೇಜಿನ ತೃತೀಯ ವರ್ಷದ ಬಿಕಾಂ ವಿದ್ಯಾರ್ಥಿಗಳು ನಡೆಸಿಕೊಟ್ಟರು.