College Code: P15GAP0063 | AISHE CODE: C58209

ನುಡಿಯ ದೀಕ್ಷೆ ನಾಡಿನ ರಕ್ಷೆ-ದೇಸಿ ಸಂಸ್ಕೃತಿ ಮತ್ತು ಸಾಮರಸ್ಯ ಉಳಿಸಿಕೊಳ್ಳುವುದೇ ರಾಜ್ಯೋತ್ಸವ

ನುಡಿಯ ದೀಕ್ಷೆ ನಾಡಿನ ರಕ್ಷೆ-ದೇಸಿ ಸಂಸ್ಕೃತಿ ಮತ್ತು ಸಾಮರಸ್ಯ ಉಳಿಸಿಕೊಳ್ಳುವುದೇ ರಾಜ್ಯೋತ್ಸವ
25 Feb 2026
Admin
145 Reads

ದೇಸಿ ಸಂಸ್ಕೃತಿ ಮತ್ತು ಸಾಮರಸ್ಯ ಉಳಿಸಿಕೊಳ್ಳುವುದೇ ರಾಜ್ಯೋತ್ಸವ

ಮಾನಸ ಟ್ರಸ್ಟ್ ಕಟೀಲ್ ಅಶೋಕ್ ಪೈ ಮೆಮೋರಿಯಲ್ ಕಾಲೇಜ್ ಶಿವಮೊಗ್ಗ ಹಾಗೂ ಐ.ಕ್ಯೂ.ಎ.ಸಿ. ಸಹಯೋಗದಲ್ಲಿ ದಿನಾಂಕ ೨೦.೧೧.೨೦೨೫ರಂದು ಕಾಲೇಜಿನಲ್ಲಿ ೭೦ನೇ ಕನ್ನಡ ರಾಜ್ಯೋತ್ಸವ “ನುಡಿಯ ದೀಕ್ಷೆ ನಾಡಿನ ರಕ್ಷೆ” ಸಂಭ್ರಮಾಚರಣೆಯು ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮವು ದೀಪ ಬೆಳಗುವುದರ ಮೂಲಕ ಮತ್ತು ಕನ್ನಡ ಭುವನೇಶ್ವರಿಗೆ ಪುಷ್ಪವನ್ನು ಅರ್ಪಿಸಿವುದರ ಮೂಲಕ ಉದ್ಘಾಟನೆಗೊಂಡು ವಿದ್ಯಾರ್ಥಿಗಳ ಪ್ರಾರ್ಥನಾ ನೃತ್ಯದೊಂದಿಗೆ ಪ್ರಾರಂಭವಾಯಿತು. ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀ ಮೋಹನ್ ಕುಮಾರ್ ಅವರು ಎಲ್ಲರನ್ನು ಸ್ವಾಗತಿಸಿ ಮಾತನಾಡಿ ನಿಸಾರ್ ಅಹಮದ್ ಅವರ ಕವಿತೆಯ ಸಾಲುಗಳನ್ನು ಉಲ್ಲೇಖಿಸಿ ರಕ್ತ ಸಂಬಂಧಕ್ಕಿಂತ ಭಾವ ಸಂಬಂಧವೂ ಮುಖ್ಯವಾಗುತ್ತದೆ ಯಾವುದೇ ಸರ್ಕಾರವು ಒಂದು ಭಾಷೆಯನ್ನು ಬೆಳೆಸಬೇಕು ಸರ್ಕಾರವೇ ಅದರ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎನ್ನುವುದಕ್ಕಿಂತ ಆ ಭಾಷಿಕರು ಕನ್ನಡ ಭಾಷೆಯನ್ನು ಉಳಿಸುವುದಕ್ಕಿಂತ ಬೆಳೆಸುವ ಮತ್ತೆ ಬಳಸುವ ವ್ಯವಸ್ಥೆ ಆಗಬೇಕು ಎಂಬುದನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕುವೆಂಪು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಕುಮಾರಚಲ್ಯ ಅವರು ಮಾತನಾಡಿ ಈ ಸೆಲ್ಫಿ ಸಂಸ್ಕೃತಿಯ ಸಂದರ್ಭದಲ್ಲಿ ನಾವು ನಮ್ಮನ್ನೇ ಅತಿ ಮುಖ್ಯವಾಗಿ ಬಿಂಬಿಸಿಕೊಳ್ಳುವಂತಹ ಆತಂಕಕಾರಿ ಬೆಳವಣಿಗೆ ಆಗುತ್ತಿದೆ. ಈ ಸಂದರ್ಭದಲ್ಲಿ ಬೆಳಕನ್ನು ಆರಿಸುವಂತಹ ಸಂಸ್ಕೃತಿ ಬೇಕಿಲ್ಲ್ಲ ಬೆಳಕನ್ನು ಹೊತ್ತಿಸುವ ಸಂಸ್ಕೃತಿ ಮತ್ತೆ ಬೆಳಕನ್ನು ಪಸರಿಸುವ ಸಂಸ್ಕೃತಿ ಹೆಚ್ಚಾಗಬೇಕು, ಕನ್ನಡವೂ ಸಾಂಸ್ಕೃತಿಕ ಬೆಳಕಾಗಬೇಕೆ ಹೊರತು ಸಂಘರ್ಷದ ಕಿಡಿಯಾಗಬಾರದು. ಒಬ್ಬರಿಂದ ಒಬ್ಬರಿಗೆ ಈ ಬೆಳಕನ್ನು ದಾಟಿಸುವ ವಿಶಾಲ ಮನಸ್ಥಿತಿ ಬರಬೇಕು. ನಮ್ಮ ಕನ್ನಡ ಸಂಸ್ಕೃತಿ ದೇಶಿಯ ಸಂಸ್ಕೃತಿಯ ಆಗಿ ಇರುವುದೇ ಹೊರತು ಅದು ಆಧುನಿಕ ಸಂಸ್ಕೃತಿ ಅಲ್ಲ ಈ ದೇಶಿಯ ಸಂಸ್ಕೃತಿಗೆ ದೀಪ ಹತ್ತಿಸುವುದು ಸಂಕೇತ. ಈ ದೀಪ ಹತ್ತಿಸಲಿಕ್ಕೆ ಬೇಕಾದಂತಹ ಹಣತೆ, ಬತ್ತಿ, ಎಣ್ಣೆ ಇವುಗಳನ್ನ ಮಾಡುವವರು ಬೇರೆ ಬೇರೆ ವರ್ಗಗಳಿಗೆ ಸೇರಿದವರಾದರು ಅದರಿಂದ ಹೊಮ್ಮುವ ಬೆಳಕು ಮಾತ್ರ ಎಲ್ಲರಿಗೆ ಬೇಕಾಗುವಂತದ್ದು. ಈ ಭಾಷೆ ಅನ್ನುವುದು ಯಾವುದೇ ಕುಲಕ್ಕೆ ಜಾತಿಗೆ ಧರ್ಮಕ್ಕೆ ಸೀಮಿತವಾಗಿಲ್ಲ ಈ ರಾಜ್ಯೋತ್ಸವ ಕನ್ನಡ ರಾಜ್ಯೋತ್ಸವ ಅಲ್ಲ ಅದು ಕರ್ನಾಟಕ ರಾಜ್ಯೋತ್ಸವವಾಗಬೇಕು ವಿಭಿನ್ನ ವರ್ಗಗಳ ಎಲ್ಲರೂ ಒಟ್ಟಿಗೆ ಸೇರಿ ಸಂಭ್ರಮವನ್ನು ಆಚರಿಸುವಂತಹ ರಾಜ್ಯೋತ್ಸವವಾಗಬೇಕು ಅವಾಗ ಮಾತ್ರ ನಿಜವಾದ ಕರ್ನಾಟಕ ರಾಜ್ಯೋತ್ಸವವಾಗುತ್ತದೆ. ಕರ್ನಾಟಕ ರಾಜ್ಯವು ವಿಭಿನ್ನ ಸಂಸ್ಕೃತಿಯ ನೆಲೆಯಾಗಿದೆ ಈ ವಿಭಿನ್ನ ಸಂಸ್ಕೃತಿಯ ನೆಲೆಯಲ್ಲಿ ಎಲ್ಲರೂ ಒಟ್ಟಿಗೆ ಇದ್ದೇವೆ. ಒಟ್ಟಿಗೆ ಭಾಷೆಯನ್ನು ಬೆಳೆಸಬೇಕಾಗಿದೆ, ವಿವೇಕದಿಂದ ಭಾಷೆಯನ್ನು ಬೆಳೆಸುವುದರಿಂದ ಆ ಭಾಷೆಯು ಬೆಳೆಯುತ್ತದೆ ಎಂದು ಅಭಿಪ್ರಾಯಪಟ್ಟರು. ಭಾಷೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು ಅದು ಸಂವಹನಕ್ಕೆ ಮಾತ್ರ ಎಂಬ ಒಂದು ಭಾವನೆ ಇರಬಾರದು ಅದು ನಮ್ಮ ಸಂಸ್ಕೃತಿ ದೇಶ ಸಮುದಾಯವನ್ನು ಪ್ರತಿನಿಧಿಸುತ್ತದೆ ಭಾಷೆಯು ಒಂದು ಗಟ್ಟಿಯಾದಂತಹ ಸಂಸ್ಕೃತಿಯ ನೆಲಮೂಲವನ್ನು ತಿಳಿಸುತ್ತದೆ ಎಂದು ಅಭಿಪ್ರಾಯವನ್ನು ಪಟ್ಟರು.

ಕನ್ನಡ ಭಾಷೆಯನ್ನು ಅಕ್ಷರಸ್ಥರು ಕೂಡ ಬೆಳೆಸುತ್ತಿಲ್ಲ ಎಂಬುದು ಕಳವಳಕಾರಿಯಾಗಿದೆ. ಹೊಸ ಭಾಷೆಯನ್ನು ಕಲಿಯಲು ಯಾವುದೇ ಅಭ್ಯಂತರಗಳು ಇರಬಾರದು. ಯಾಕೆಂದರೆ ಕನ್ನಡವೂ ಅನೇಕ ಅನ್ಯ ಭಾಷೆಗಳ ಪದಗಳಿಂದ ಸಮೃದ್ಧವಾದಂತಹ ಭಾಷೆ. ಹಾಗಾಗಿ ಕನ್ನಡ ಭಾಷೆಯು ಸಾಮರಸ್ಯದ, ಸಂಸ್ಕೃತಿಯ ಭಾಷೆಯಾಗಿ ರೂಪುಗೊಂಡಿದೆ. ಕನ್ನಡದ ಮೇರು ಸಾಹಿತಿಗಳಾದ ಮಾಸ್ತಿ, ಡಿ.ವಿ.ಜಿ., ಪು.ತೀ.ನ. ಅವರು ಮೂಲ ಅನ್ಯಭಾಷಿಕರಾದರೂ ಕನ್ನಡಕ್ಕೆ ಕೀರ್ತಿಯನ್ನು ತಂದ ಮಹನೀಯರು ಎಂದು ತಿಳಿಸಿದರು.

ಕರ್ನಾಟಕ ಬಹು ಭಾಷೆಗಳ ವೈವಿಧ್ಯತೆಯನ್ನು ಒಳಗೊಂಡಿರುವ ಪ್ರದೇಶ ಹಾಗಾಗಿ ಸಾಮರಸ್ಯವೂ ಅದರ ಒಂದು ಅವಿಭಾಜ್ಯ ಅಂಗವಾಗಿದೆ ಎಂದು ಅಭಿಪ್ರಾಯ ಪಟ್ಟರು. ಆವೇಶದಿಂದ ಯಾವುದೇ ಭಾಷೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಿದರು. ಕನ್ನಡ ರಾಜ್ಯೋತ್ಸವವು ತಿಂಗಳ ನಾಟಕದ ರಾಜ್ಯೋತ್ಸವವಾಗದೆ, ಸಂಘರ್ಷ ಮತ್ತು ದ್ವೇಷಗಳಿಂದ ದೂರವಿರುವ ಸಾಮರಸ್ಯದ ರಾಜ್ಯೋತ್ಸವವಾಗಬೇಕು ಎಂದು ತಿಳಿಸಿದರು. 

ಅಧ್ಯಕ್ಷೀಯ ನುಡಿಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿ ರವರು ಕನ್ನಡವನ್ನು ಮನಸ್ಸಿನಲ್ಲಿ, ಹೃದಯದಲ್ಲಿ ಇಳಿಸಿಕೊಳ್ಳಬೇಕಾದರೆ, ಭಾಷೆಯ ಬಳಕೆ ಅತಿ ಮುಖ್ಯವಾಗಿರುತ್ತದೆ. ಕರ್ನಾಟಕ ರಾಜ್ಯೋತ್ಸವದ ಸಂಭ್ರಮ, ಸಾಮರಸ್ಯ, ಗೌರವ, ಪ್ರೀತಿಯ ಸಂಭ್ರಮವಾಗಬೇಕು. ರಾಜ್ಯೋತ್ಸವವು ಎಲ್ಲಾ ಧರ್ಮ ಜಾತಿ ಕಟ್ಟುಪಾಡುಗಳನ್ನು ಮೀರಿದ ಒಂದು ಉತ್ಸವವಾಗಬೇಕು. ಇದೊಂದು ಎಲ್ಲರೂ ಆಚರಿಸುವ ಹಬ್ಬವಾಗಬೇಕು. ಆ ಮೂಲಕ ಕನ್ನಡ ಸಂಸ್ಕೃತಿಯನ್ನು ಬೆಳೆಸೋಣ ವಿಶಾಲಗೊಳಿಸೋಣ ಜಗತ್ತಿನಾದ್ಯಾಂತ ಕನ್ನಡ ಮನಸ್ಸನ್ನ ಕಟ್ಟೋಣ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮವು ಕು. ತನ್ಮಯೀ ಮತ್ತು ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ಕು. ವೈಷ್ಣವಿ, ದ್ವಿತೀಯ ಬಿ.ಎಸ್ಸಿ. ಅವರು ಸ್ವಾಗತ ನೃತ್ಯವನ್ನು ಮಾಡಿದರು. ಇದೇ ಸಂದರ್ಭದಲ್ಲಿ ಪ್ರೊ. ಕುಮಾರಚಲ್ಯ ಅವರನ್ನು ಹಾಗೂ ಮಣಿಪಾಲ್ ಆಕಾಡೆಮಿಯ ಡಾ. ರಾಜಲಕ್ಷ್ಮಿರವರನ್ನು ಕಾಲೇಜಿನ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮಾನಸ ಸಾಂಸ್ಕೃತಿಕ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿ ಅವರು, ಶೈಕ್ಷಣಿಕ ಆಡಳಿತಾಧಿಕಾರಿಗಳಾದ ಪ್ರೊ. ರಾಮಚಂದ್ರ ಬಾಳಿಗ, ಐ.ಕ್ಯೂ.ಎ.ಸಿ. ಸಂಯೋಜಕರಾದ ಡಾ. ಆರ್ಚನಾ ಭಟ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಮಧು ಟಿ. ಅವರು ವಂದನಾರ್ಪಣೆಯನ್ನು ಮಾಡಿದರು. ಕು. ಸ್ಪೂರ್ತಿ ವೈ.ಎಚ್., ತೃತೀಯ ಬಿ.ಎಸ್.ಡಬ್ಲೂ. ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಕಾಲೇಜಿನ ಎಲ್ಲಾ ಬೋಧಕ-ಬೋಧಕೇತರ ವರ್ಗದವರು ಉಪಸ್ಥಿತರಿದ್ದರು.