College Code: P15GAP0063 | AISHE CODE: C58209

ಎದೆಯ ಹಣತೆ- ಒಮ್ಮೆ ಹೆಣ್ಣಾಗು ಪ್ರಭುವೆ

ಎದೆಯ ಹಣತೆ- ಒಮ್ಮೆ ಹೆಣ್ಣಾಗು ಪ್ರಭುವೆ
25 Feb 2026
Admin
118 Reads

ಹೊಸ ರಂಗ ಸಾಧ್ಯತೆಯಲ್ಲಿ ಮೂಡಿ ಬಂದ ಎದೆಯ ಹಣತೆ- ಒಮ್ಮೆ ಹೆಣ್ಣಾಗು ಪ್ರಭುವೆ

ಬುಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಅವರ ‘ಎದೆಯ ಹಣತೆ’ ಹಾಗು ‘ಒಮ್ಮೆ ಹೆಣ್ಣಾಗು ಪ್ರಭುವೇ’ ಎರಡೂ ಕತೆಗಳ ವಾಚನಾಭಿನಿಯ- ವಿಶೇಷ ರಂಗಪ್ರಸ್ತುತಿ ಶಿವಮೊಗ್ಗದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು ಸಭಾಂಗಣದಲ್ಲಿ ನಡೆಯಿತು. ನೇಟಿವ್ ತಂಡಕ್ಕಾಗಿ ಆರ್.ಎಸ್ ಹಾಲಸ್ವಾಮಿ ಅವರ ನಿರ್ದೇಶನದಲ್ಲಿ ಡಾ. ನಾಗಭೂಷಣ್ ಹಾಗೂ ಡಾ. ಭಾರತಿದೇವಿ ಈ ವಾಚನಾಭಿನಯ ಪ್ರಸ್ತುತಪಡಿಸಿದರು. ಇಬ್ಬರೇ ಕಲಾವಿದರು ಕಥೆಗೆ ದನಿಯಾಗಿ ತಮ್ಮ ಮಾತಿನ ಏರಿಳಿತದಲ್ಲೇ ಕಥೆಗಳ ಅಂತಃಸತ್ವವನ್ನ ಪ್ರೇಕ್ಷಕರ ಮನಮುಟ್ಟಿಸುವಲ್ಲಿ ಯಶಸ್ವಿಯಾದರು. ಪ್ರಸ್ತುತಿಯ ಆರಂಭದಲ್ಲಿ 'ಜಬ್ ದಿಲ್ ಹಿ ಟೂಟ್ ಗಯಾ...' ಹಾಡು ಒಂದು ಆಪ್ತ ಪ್ರವೇಶಿಕೆಯನ್ನು ದೊರಕಿಸುವಲ್ಲಿ ಸಫಲವಾಯಿತು. ಅಲ್ಲದೆ ಇಡೀ ಪ್ರಸ್ತುತಿ ಪರಿಣಾಮಕಾರಿಯಾಗಲು ಸಂಗೀತ ಪ್ರಮುಖವಾಗಿದ್ದು ಕಂಡು ಬಂತು.

 ಬಾಡಿದ ಮುಖದ ಅಭಿವ್ಯಕ್ತಿಯೊಂದಿಗೆ ಡಾ. ಭಾರತೀದೇವಿ ಪ್ರಸ್ತುತಿ ಆರಂಭಿಸಿದರು. ಅಸಹಾಯಕಳಾದ ಮೆಹರುನ್ ತವರು ಮನೆಯ ಮೆಟ್ಟಿಲೇರಿದ್ದಾಳೆ, ಅವಳನ್ನ ಅವಳ ಅಪ್ಪ ಹಾಗೂ ಅಣ್ಣಂದಿರೆಲ್ಲ ಗಾಬರಿಯಿಂದ ನೋಡುತ್ತಿದ್ದಾರೆ. ಅಮ್ಮ, ತಂಗಿ ಹಾಗೇ ಅತ್ತಿಗೆ ಕೂಡಾ ಸ್ತಬ್ದವಾಗಿ ನಿಂತಿದ್ದಾರೆ!!.. ಇಂತಹುದೊಂದು ಮೌನ ಕ್ಷಣ ಭಾರತೀದೇವಿ ಅವರ ಅವರ ಧ್ವನಿ ತರಂಗಗಳಲ್ಲಿ ಮೊಳಗುತ್ತಿತ್ತು, ಆ ಆರ್ತ ದನಿಯನ್ನ ಅದೆಷ್ಟು ನಾಜುಕಾಗಿ ಅವರ ತುಟಿಗಳು ನಿಭಾಯಿಸುತ್ತಿದ್ದೆಂದರೆ ನೋಡುಗ ಕೂಡಾ ಭಾವುಕಳಾಗಿ ಕಥೆಯಲ್ಲಿ ಕರಗಿಹೋದೆ.

ಮೆಹರುನ್ ದೊಡ್ಡಣ್ಣನ ದೊಡ್ಡ ದನಿಗೆ ಡಾ. ನಾಗಭೂಷಣ್ ಅವರು ಕೊರಳಾಗಿ ಏರು ದನಿಯಲ್ಲಿ ಮಾತುಗಳನ್ನ ಎಸೆಯುವಾಗ ನಿಜವಾಗಿಯೂ ಪ್ರೇಕ್ಷಕರೂ ಮೆಹರೂನಳ ತವರು ಮನೆಯಲ್ಲೆಲ್ಲೋ ಅವಳೊಟ್ಟಿಗೇ ಕುಳಿತು ಆ ಏರು ದನಿಯ ಬೈಗುಳಗಳನ್ನು ಆಲಿಸಿಕೊಳ್ಳುತ್ತಿದ್ದಾರೆ ಎನಿಸುತ್ತಿತ್ತು!!.. ಬುರ್ಖಾ ಅನ್ನೋ ಪರದೆಯಡಿಗೆ ಹೆಣ್ಣು ಮಕ್ಕಳು ಅದೆಷ್ಟು ಕಣ್ಣೀರು ಚೆಲ್ಲಿದರೂ ಆಚೆಗೊಂತು ಬರಲಾರದು ಹಾಗೇ ಆ ತೇವ ಕಂಡೂ ತವರು ಅವಳನ್ನು ಇನ್ನೂ ದೂರ ಮಾಡಿದ್ದು ಅತ್ಯಂತ ದಾರುಣ ಎನಿಸಿತು. ಮೆಹರುನ್ ಹಾಗೂ ಅವಳಣ್ಣನ ಮಾತುಗಳು ಮತ್ತು ಅಲ್ಲಿನ ಆ ಪರಿಸ್ಥಿತಿ ಎಲ್ಲವೂ ಗಂಭೀರವಾಗಿ ಆರ್ದ್ರತೆಯಿಂದ ನಾಗಭೂಷಣ್ ಮತ್ತು ಭಾರತೀ ದೇವಿ ಅವರಿಬ್ಬರ ನಾಲಿಗೆ ಹಾಗೂ ಉಚ್ಚಾರಗಳಲ್ಲೇ ಕಣ್ಕಟ್ಟುತ್ತಿದ್ದವು..

ಕೇವಲ ತಲಾಕ್ ಎಂಬ ಒಂದೇ ಒಂದು ಪದದ ಮೂರು ಬಾರಿಯ ಉಚ್ಚಾರಣೆಗೆ ಹೆಣ್ಣಿನ ಇಡೀ ಜೀವನವನ್ನ ತಿರುಚಿ, ಮುರಿದು ಹಾಕುವ ಶಕ್ತಿ ಇದೆ ಎನ್ನುವುದು ನಿಜವಾಗಿಯೂ ನೋವಿನ ಸಂಗತಿ!!, ಆದರೆ ಅಂತಹುದೊಂದು ಮಾತನ್ನ ನಾನೇ ಅವನಿಗೆ ಎಸೆಯುತ್ತೇನೆ ಎಂದ ಮೆಹರುನ್ ಪ್ರೇಕ್ಷಕರಿಗೆ ಪ್ರಿಯವಾಗುತ್ತಾಳೆ. ಹೀಗೇ ಮೆಹರುನ್ ತನ್ನ ಓದಿನ ಕನಸನ್ನೂ ಹಾಗೂ ಪ್ರೀತಿಯನ್ನೂ ಗಂಡನ ಮಾತುಗಳಿಗೆ ಸೋತು ತನ್ನ ಮೈ ಮನಸ್ಸೆರಡನ್ನೂ ಅವನಿಗೇ ಸುರಿದು ತಾನು ಹೇಗೇ ಖಾಲಿಯಾಗಿದ್ದಾಳೆ ಎನ್ನುವುದನ್ನ ನಾಗಭೂಷಣ್ ಅವರು ತಮ್ಮ ದನಿಯ ಮೂಲಕ ಉದ್ಗರಿಸಿದ್ದು ಮನಸ್ಸನ್ನ ಸೀಳುವಂತಿತ್ತು. ಅಸಹಾಯಕಳಾಗಿ ಬೆಂದ ಮೆಹರೂನಳಂತಹ ಎಷ್ಟೋ ಹೆಣ್ಣು ಮಕ್ಕಳ ಧೀರ್ಘ ಆಳ ಕಂಬನಿಗಳು ಪ್ರೇಕ್ಷಕರೆದೆಯ ಬಾಂದಳಕ್ಕೆ ತಲುಪಿ ದೊಪ್ ಎಂದು ಬಿದ್ದವು!!.. ಸಹಾಯಕ್ಕಾಗಿ ಮೊರೆ ಬಂದ ಮನೆ ಮಗಳು ಮೆಹರೂನಳನ್ನ ಹರಿತ ಮಾತುಗಳಿಂದ ಸಂಧಾನ ಮಾಡಿ ಕೊನೆಗೆ ಹೆಣ್ತನವೇ ತಪ್ಪು ಎನ್ನುವಂತಹ ನಿರ್ಧಾರದ ತುತ್ತ ತುದಿಗೆ ಅವಳನ್ನ ಎಳೆದು ನಿಲ್ಲಿಸಿದ ಅವಳದ್ದೇ ಸ್ವಂತ ಕುಟುಂಬದ ಸದಸ್ಯರು ಕತೆಯಷ್ಟೇ ಅಲ್ಲ, ವಾಸ್ತವ ಸಮಾಜದಲ್ಲೂ ಇದ್ದಾರೆ ಎನ್ನಿಸಿತು. ಕೊನೆಗೆ ಕಣ್ಣೀರಲ್ಲೇ ನೆಂದು-ನೊಂದ ಮೆಹರೂನಳ ಎದೆಯ ಹಣತೆ ಹೊಸ ಭರವಸೆಯ ಬೆಳಕಲ್ಲಿ ಮತ್ತೆ ಹೊತ್ತಿಕೊಂಡ ಪರಿ ಅದ್ಭುತ.  

ಪ್ರಸ್ತುತಿಯ ಎರಡನೇ ಕತೆ ‘ಒಮ್ಮೆ ಹೆಣ್ಣಾಗು ಪ್ರಭುವೇ’ ಈ ಒಂದು ಶೀರ್ಷಿಕೆಯೇ ಇಡೀ ಕಥೆಯನ್ನು ಹಿಡಿದಿಟ್ಟುಕೊಂಡಿತ್ತು, ಸಮಸ್ತ ಹೆಣ್ಣು ಕುಲ ಮನದಲ್ಲಿ ಒಮ್ಮೆಯಾದರೂ ಮಿಂಚಿಹೋದ ಮಾತಿದು. ಹೆಣ್ಣು ತಾನು ಅನುಭವಿಸುವ ವಿಭಿನ್ನ ದೈಹಿಕ ಹಾಗೂ ಮಾನಸಿಕ ನೋವುಗಳೆಲ್ಲವನ್ನು ನಗುತ್ತಲೇ ಹುಬ್ಬುಗಳನ್ನ ಮೇಲಕ್ಕೆತ್ತಿ ಪ್ರಸ್ತುತಪಡಿಸುವ ರೀತಿಯಲ್ಲಿ ಭಾರತೀ ದೇವಿ ಅಭಿನಯ ಅದ್ಭುತ. ಅವರ ಕಣ್ಣು ಮತ್ತು ಧ್ವನಿ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತುತ್ತವೆ., ಇತ್ತ ಕಡೆಗೆ ಡಾ. ನಾಗಭೂಷಣ್ ಅವರು ಅವುಗಳಿಗೆ ಪ್ರತ್ಯುತ್ತರ ಕೊಡುತ್ತಿದ್ದದ್ದು ಅಕ್ಷರಗಳೆದ್ದು ಅಭಿನಯಿಸುವಂತೆ ಭಾಸವಾಗುತ್ತಿತ್ತು. ಹೆಣ್ಣೊಬ್ಬಳು ದೇವರಲ್ಲಿ ತನ್ನೆಲ್ಲ ಮಾತುಗಳನ್ನು ಹಾಗೂ ನೋವುಗಳನ್ನು ಒಪ್ಪಿಸುವಂತಹ, ಪ್ರಶ್ನಿಸುವಂತಹ ಮತ್ತು ಕಿವಿ ಇದ್ದರೆ ಕೇಳು ಎಂಬಂತೆ ತನ್ನ ಬಾಲ್ಯದಿಂದ ಇಲ್ಲಿಯವರೆಗಿನ ಎಲ್ಲವನ್ನೂ ಹಂತ ಹಂತವಾಗಿ ಬಿಡಿಸಿ ಹೇಳುವಂತೆ ಇರುವ ಈ ಭಾವಪೂರ್ಣ ಕಥೆಯ ಪ್ರಸ್ತುತಿ ಬೇರೊಂದು ವಿವರಿಸಲಾಗದ ಹಂತದಲ್ಲೇ ಇದೆ. ಹೆಣ್ಣು ತಾನು ಹಾಗೂ ತನ್ನಮ್ಮನ ನಡುವಣ ಆ ಅನೂಹ್ಯ ಅನುಬಂಧವನ್ನ ವಿವರಿಸುತ್ತಾ, ಅಮ್ಮ ಅವಳನ್ನು ಹೇಗೆ ಚಿಕ್ಕಂದಿನಿಂದ ಸಮಾಜಕ್ಕೊಡ್ಡಲು ರೂಪಿಸಿದ್ದಳು ಹಾಗೇ ಇವಳೂ ಕೂಡ ತಕರಾರಿಲ್ಲದೆ, ಲಜ್ಜೆಯನ್ನ ಕಣ್ಣೆವೆಗಳಲ್ಲಷ್ಟೇ ತುಳುಕಲು ಬಿಟ್ಟು, ನಗೆಯನ್ನು ತುಟಿಯಂಚಿಂದ ಹಾರ ಬಿಡದೇ, ಸೆರಗನ್ನ ತಲೆಯಿಂದ ಜಾರ ಬಿಡದೇ ತಯಾರಾಗಿದ್ದ ಬಗೆ ಮತ್ತು ಮದುವೆಯ ಸಮಯದಲ್ಲಿನ ವಿವರಣೆಯಂತೂ ಹೃದಯ ಹಿಂಡಿದವು. 

ಪ್ರೇಕ್ಷಕರೆಲ್ಲರನ್ನೂ ಹಸಿಹಸಿಯಾಗಿ ದಾಳಿ ಮಾಡಿದ ಪ್ರಸಂಗವೆಂದರೆ ‘ಅಮ್ಮನ ಸಾವು’. ಅಲ್ಲಿ ತಾನು ಹೋಗಲಾರದೆ ಇಲ್ಲಿಯೇ ಅವಳ ಕೊಯ್ದ ದೇಹದ ಬಗೆಗೆ ಮಗಳು ಕಲ್ಪಿಸುವ ಚಿತ್ರಣ. ಬಹುಶಃ ಅವರು ಅಮ್ಮನ ಹೃದಯವನ್ನ ಕೊಯ್ದಿರಲಾರರು!! ಕೊಯ್ದರು ಅಲ್ಲಿ ಹೆಪ್ಪುಗಟ್ಟಿದ ರಕ್ತದ ಬದಲು ಹೆಪ್ಪುಗಟ್ಟಿದ ಆತ್ಮ ಸಿಗಬಹುದೇನೋ??, ಅವಳ ಆತ್ಮವನ್ನು ಮುಟ್ಟಿದವರಾರೂ ಇಲ್ಲ!!, ಅವಳ ತೆರೆದ ಕಣ್ಣುಗಳು ಯಾರನ್ನ ನೋಡುವ ನಿರೀಕ್ಷೆಯಲ್ಲಿದ್ದವೋ ಎನ್ನುವುದು". ಈ ಮಾತುಗಳನ್ನ ಕಲಾವಿದೆ ಅಷ್ಟೇ ಪರಿಣಾಮಕಾರಿಯಾಗಿ ನಿರ್ವಹಿಸಿದರು. ಸಹಜವಾಗಿಯೇ ಗಂಡು ಕೇಳುವ ಈ ಪ್ರಶ್ನೆ! 'ಸಾಕುವವನು ನಾನು, ಹೆರಲಿಕ್ಕೆ ಏನು ಕಷ್ಟ??' ಎನ್ನುವಂತಹ ಕೊಡಲಿ ಏಟಿನ ಪ್ರಶ್ನೆಯನ್ನ ನಾಗಭೂಷಣ್ ಅವರು ಅಷ್ಟೇ ವ್ಯಂಗ್ಯ ಹಾಗೂ ಹರಿತ ಭಾವನೆಗಳನ್ನು ಬೆರೆಸಿ ದನಿಯಲ್ಲಿ ಮೂಡಿಸಿದರು.. ಈ ಪ್ರಶ್ನೆಗೆ ಭಾನು ಮುಸ್ತಾಕ್ ಅವರ ಬರಹದುತ್ತರ ಇನ್ನೂ ಅರ್ಥಪೂರ್ಣ. ತನ್ನಿಡೀ ದೇಹವನ್ನ ಮುರಿದು ಕೊಂದು ಇನ್ನೊಂದು ಜೀವಕ್ಕೆ ಜನುಮ ಕೊಡುವ ಹೆಣ್ಣಿನ ನೋವು ಅವನೆಲ್ಲಿ ಬಲ್ಲನು??. ನೀನೊಮ್ಮೆ ಹಡೆಯುವ ಕಷ್ಟ ಏನೆಂದು ತಿಳಿಸಿದ್ದರೆ ಅವನು ಹೀಗೆ ಹೇಳುತ್ತಿರಲಿಲ್ಲವೇನೋ!- ಎನ್ನುವಂತಹ ಈ ಸಾಲುಗಳು ದೇವರೆನ್ನುವ ಅಸ್ತಿತ್ವದೆದೆಗೇ ಹೊಡೆವ ನೇರ ಮೊನಚು ಮಾತು. ನೀನು ಸೃಷ್ಟಿಕರ್ತ ಅವನು ನಿನಗೇ ಪ್ರಿಯ ಅವನಿಗೆ ಈ ನೋವಿನ ಅರಿವೂ ಇಲ್ಲ!! ಎನ್ನುವ ಈ ರೀತಿಯ ಮಾತುಗಳು ದೇವನನ್ನೂ ನಡುಗಿಸುವಂತದ್ದು. 

ಕೊನೆಯ ಹಂತದಲ್ಲಿ ಡಾ.ಭಾರತಿ ದೇವಿ ಮತ್ತು ಡಾ.ನಾಗಭೂಷಣ್ ಇಬ್ಬರೂ ಎದ್ದು ನಿಂತು ಝೇಂಕರಿಸಿದ "ಒಮ್ಮೆ ಹೆಣ್ಣಾಗು ಪ್ರಭುವೇ!!, ಒಮ್ಮೆ ಹೆಣ್ಣಾಗು ಪ್ರಭುವೇ!! " ಎಂಬಾ ಸಾಲುಗಳಿಗೆ ಪ್ರೇಕ್ಷಕರೂ ಧ್ವನಿಯಾಗುತ್ತಾರೆ. ವಿಭಿನ್ನ ರಂಗ ಪ್ರಸ್ತುತಿಯ ವಾಚನಾಭಿನಯದ ಮೂಲಕ ಕಥೆಗಳನ್ನು ಪ್ರೇಕ್ಷಕನ ಮನದಾಳದಲ್ಲಿ ಕಟ್ಟಿಕೊಡಬಹುದು ಎಂಬುದೇ ಒಂದು ವಿಶೇಷ. ಅದನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದ ಇಡೀ ತಂಡ ರಂಗಭೂಮಿಯಲ್ಲಿ ಹೊಸ ಸಾಧ್ಯತೆಯೊಂದನ್ನು ಅನ್ವೇಷಿಸಿದೆ ಎಂದರೆ ತಪ್ಪಾಗದು.

- ಕವನಾ ಕೆ.ಒ. 

ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ


Category Anveshana

Clear Filter