ದಿನಾಂಕ 5 ಜುಲೈ2025 ರಂದು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಮನಃಶಾಸ್ತ್ರ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದವಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇದರ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕರಾಗಿರುವ ಡಾ. ನಂದಕುಮಾರ್ ಪೂಜಂ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಇಂದು ಮನಃಶಾಸ್ತ್ರಜ್ಞರು ಎಲ್ಲ ಕ್ಷೇತ್ರಗಳಲ್ಲೂ ಅತಿ ಅಗತ್ಯವಾಗಿ ಬೇಕಾಗಿರುವ ತಜ್ಞರು. ಎಲ್ಲಾ ಶಾಲೆಗಳಲ್ಲೂ ಇಂದು ಮನಃಶಾಸ್ತ್ರಜ್ಞರು ಲಭ್ಯವಿರಲೇ ಬೇಕಾಗಿದೆ,
ಶಾಲಾ ವಿದ್ಯಾರ್ಥಿಗಳಲ್ಲಿ ಮಾನಸಿಕ ಅಸ್ವಸ್ಥತೆಗಳಿಗಿಂತಲೂ ವರ್ತನಾತ್ಮಕ ಸಮಸ್ಯೆಗಳನ್ನು ಹೊಂದಿರುವುದನ್ನು ಕಾಣುತ್ತೇವೆ. ಇಂಥ ಸಮಸ್ಯೆಗಳನ್ನು ಮನಃಶಾಸ್ತ್ರೀಯವಾಗಿ ಅರ್ಥೈಸಿಕೊಂಡು ಪರಿವರ್ತಿಸಬೇಕಾಗುತ್ತದೆ.ಅದಕ್ಕೆ ಮನಃಶಾಸ್ತ್ರಜ್ಞರು ಬಹಳ ಮುಖ್ಯವಾಗಿ ಸೂಕ್ತ ಮಾನಸಿಕ ಮಾಪಕಗಳನ್ನು ಬಳಸಿ ಸರಿಯಾದ ವರ್ತನಾತ್ಮಕ ಬದಲಾವಣೆಯ ತಂತ್ರಗಳನ್ನು ಬಳಸುತ್ತಾರೆ. ವಿದ್ಯಾರ್ಥಿಗಳು ಹಲವು ರೀತಿಯ ವರ್ತನಾ ಸಮಸ್ಯೆಗಳನ್ನು ತೋರ್ಪಡಿಸುತ್ತಾರೆ. ವಿನಾಕಾರಣ ಬೇರೆಯವರನ್ನು ಛೇಡಿಸುವುದು, ಸುಳ್ಳು ಹೇಳುವುದು, ಕಳ್ಳತನ ಮಾಡುವುದು, ಇದಿರು ಹೇಳುವುದು, ವಸ್ತುಗಳನ್ನು ಹಾಳುಮಾಡುವುದು, ಇದಿರು ನುಡಿಯುವುದು , ಅನಗತ್ಯವಾಗಿ ಹಿಂಸಿಸುವುದು ಇತ್ಯಾದಿ ನಡವಳಿಕೆಗಳು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಮಾತ್ರವಲ್ಲದೆ ಸಾಮಾಜಿಕ ಸ್ವಾಸ್ಥ್ಯಕ್ಕೂ ಮಾರಕ.
ಇವುಗಳನ್ನು ಬದಲಾಯಿಸದಿದ್ದಲ್ಲಿ ಅವರು ಮುಂದೆ ಮಾನಸಿಕ ಅಸ್ವಸ್ಥೆಗಳಿಗೆ ಒಳಗಾಗುವ ಸಾಧ್ಯತೆಗಳೇ ಹೆಚ್ಚು ಆದುದರಿಂದ MSc Psychology ಮುಗಿಸುವ ವಿಧ್ಯಾರ್ಥಿಗಳು ಶಾಲೆಗಳಲ್ಲಿ ಉದ್ಯೋಗಗಳನ್ನು ಕಂಡುಕೊಳ್ಳಿರಿ ಎಂದು ಹೇಳಿದರು. ಮಾನಸ ಟ್ರಸ್ಟ್ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಮನಃಶಾಸ್ತ್ರ ಸ್ನಾತಕೋತ್ತರ ಪದವಿ ಪಡೆದ ವಿದ್ಯಾರ್ಥಿಗಳು ಅದೃಷ್ಟವಂತರು, ಈ ಕಾಲೇಜ್ ವಿದ್ಯಾರ್ಥಿಗಳಿಗೆ ತನ್ನ ವಿವಿಧ ಕಾರ್ಯಕ್ರಮಗಳ ಮೂಲಕ ಹಾಗೂ ತನ್ನದೇ ಮಾನಸ ಆಸ್ಪತ್ರೆಯ ಮೂಲಕ ಅತ್ಯುತ್ತಮ ತರಬೇತಿಯನ್ನು ನೀಡುತ್ತಿದೆ. ಇದರ ಕಾರಣದಿಂದ ಇಲ್ಲಿಯ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಕೆಲಸ ಮಾಡುತ್ತಾರೆ ಎಂದು ಬಣ್ಣಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾನಸ ಟ್ರಸ್ಟ್ನ ನಿರ್ದೇಶಕರಾಗಿರುವ ಡಾ. ರಜನಿ ಪೈ ರವರು ಮಾತನಾಡುತ್ತಾ ಮನಃಶಾಸ್ತ್ರಜ್ಞರು ಬೇರೆಯವರ ಮಾನಸಿಕ ಆರೋಗ್ಯ ಮಾತ್ರವಲ್ಲ ತಮ್ಮ ಆ ರೋಗ್ಯವನ್ನೂ ಕಾಯ್ದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಹಿಂದಿನ ಕಾಲದಲ್ಲಿ ಒತ್ತಡದಿಂದ ಹೊರಗೆ ಬರುವುದು ಹೇಗೆ ಎಂದು ತಿಳಿಸಬೇಕಿತ್ತು ಆದರೆ ಇಂದು ಒತ್ತಡದೊಂದಿಗೆ ಬದುಕುವ ಕೌಶಲ್ಯ ಬೇಕಿದೆ ಅದನ್ನು ರೂಢಿಸಿಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಎಂ ಎಸ್ಸಿ ಸೈಕಾಲಜಿ ಈ ವರ್ಷ ಪೂರೈಸುತ್ತಿರುವ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಂಶುಪಾಲರಾದ ಡಾ. ಸಂಧ್ಯಾ ಕಾವೇರಿಯವರು ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆಯೊಂದಿಗೆ 2017ರಲ್ಲಿ ಮನಃಶಾಸ್ತ್ರ ಹಾಗೂ ಸಮಾಜಕಾರ್ಯದ ಪದವಿ ಶಿಕ್ಷಣದೊಂದಿಗೆ ಪ್ರಾಂಭಿಸಲಾದ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಇಂದು ವಿವಿಧ ಪದವಿ ಶಿಕ್ಷಣಗಳಾದ BA, BSc, BSW, BCom ಹಾಗೂ BCA ಮತ್ತು MSc Psychology ಶಿಕ್ಷಣ ಲಭ್ಯವಿದೆ. ಈ ವರ್ಷದಿಂದ ಕುವೆಂಪು ವಿಶ್ವವಿದ್ಯಾಲಯ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಮನಃಶಾಸ್ತ್ರದ ವಿಭಾಗವನ್ನು ಸಂಶೋಧನಾ ಕೇಂದ್ರವಾಗಿ ಅನುಮೋದನೆ ನೀಡಿರುವುದು ಗೌರವವನ್ನು ಜವಾಬ್ದಾರಿಯನ್ನು ಹೆಚ್ಚಿಸಿದೆ ಎಂದು ವಿದ್ಯಾರ್ಥಿಗಳಿಗೆ ವಿಭಾಗದ ಎಲ್ಲರಿಗೂ ಅಭಿನಂದಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಹಾಗೂ ವಾರ್ಷಿಕ ವರದಿಯನ್ನು ಮನಃಶಾಸ್ತ್ರ ವಿಭಾಗದ ಉಪನ್ಯಾಸಕ ಮಂಜುನಾಥ್ ನಡೆಸಿದರು. ವಿಭಾಗದ ಮುಖಸ್ಥರಾದ ಡಾ. ಅರ್ಚನಾ ಭಟ್ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ಉಪನ್ಯಾಸಕಿ ಶಿಲ್ಪಾ ಪ್ರಶಸ್ತಿ ವಿತರಣೆಯ ನಿರ್ವಹಣೆ ಮಾಡಿದರು. ಉಪನ್ಯಾಸಕಿ ಗೌರಿ ಶ್ರೀ ಎಲ್ಲರನ್ನು ವಂದಿಸಿದರು. ಪ್ರಥಮ ವರ್ಷದ ವಿದ್ಯಾರ್ಥಿಗಳು ಪ್ರಾರ್ಥನೆಯನ್ನು ಹಾಡಿದರು. ವಿದ್ಯಾರ್ಥಿಗಳಾದ ಆಲಿಯಾ ಹಾಗೂ ಕೀರ್ತನ ತಮ್ಮ ಅನುಭವಗಳನ್ನು ಹಂಚಿಕೊಂಡರು.