• ಆಶಾ ಕಾರ್ಯಕರ್ತರು ಸಾಮಾಜಿಕ ಸ್ವಾಸ್ಥ್ಯದ ಹರಿಕಾರರು – ಡಾಕ್ಟರ್ ಶಿವಕುಮಾರ

    • March 11, 2025
    • Posted By : Kapmi Library
    • 0 Comment

    ಮಾನಸ ಟ್ರಸ್ಟ್ ನ ಕಟೀಲ ಅಶೋಕ್ ಪೈ ಸ್ಮಾರಕ ಕಾಲೇಜು ,ಸಮಾಜಕಾರ್ಯ ವಿಭಾಗ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಸುಬ್ಬಯ್ಯ ವೈದ್ಯಕೀಯ ಮಹಾವಿದ್ಯಾಲಯ ಸಹಯೋಗದಲ್ಲಿ ಈ ದಿನ ಕೊನಗವಳ್ಳಿ ಗ್ರಾಮ ಪಂಚಾಯಿತಿಯ ಸೇವಾಲಾಲ್ ನಗರದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂಟು ಜನ ಆಶ ಕಾರ್ಯಕರ್ತರನ್ನು ಗೌರವಿಸಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಉಪ ಪ್ರಾಂಶುಪಾಲರು ಸ್ತ್ರೀ ಸ್ವಾಸ್ಥ್ಯ ವಿಭಾಗದ ಮುಖ್ಯಸ್ಥರು ಆಗಿರುವ ಡಾ. ಶಿವಕುಮಾರ್ ರವರು ಮಾತನಾಡುತ್ತಾ ಆಶಾ ಕಾರ್ಯಕರ್ತರು ಸಮಾಜದ ಸ್ವಾಸ್ಥ್ಯದ ಹರಿಕಾರ ರಿದ್ದಂತೆ ಎಂದು ತಿಳಿಸಿದರು. 

    ವಿಶ್ವ ಮಹಿಳಾ ದಿನಾಚರಣೆಯನ್ನು ಕೊನೆಗವಳ್ಳಿ ಗ್ರಾಮ ಪಂಚಾಯಿತಿಯ ಎಂಟು ಜನ ಆಶಾ ಕಾರ್ಯಕರ್ತರನ್ನು ಗೌರವಿಸುವ ಮೂಲಕ ಆಚರಿಸುತ್ತಿರುವುದು ಅತ್ಯಂತ ಶ್ಲಾಘನೀಯ ವಿಷಯ ಎಂದು ಅವರು ತಿಳಿಸಿದರು. ಸನ್ಮಾನವನ್ನು ಸ್ವೀಕರಿಸಿದ ಆಶಾ ಕಾರ್ಯಕರ್ತರ ಪರವಾಗಿ ಸೇವಾಲಾಲ್ ನಗರದ ಸುಮಿತ್ರಾ ಬಾಯಿಯವರು ಮಾತನಾಡುತ್ತಾ ಆಶಾ ಕಾರ್ಯಕರ್ತರನ್ನು ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನವರು ಗುರುತಿಸಿರುವುದು ಅತ್ಯಂತ ಸಂತೋಷವನ್ನು ತಂದಿದೆ. ಆಶಾ ಕಾರ್ಯಕರ್ತರು ಕರೋನಕಾಲದಲ್ಲಿ ಕೂಡ ನಿಷ್ಕಲ್ಮಶವಾಗಿ ಧೈರ್ಯದಿಂದ ಸೇವೆಯನ್ನು ಸಲ್ಲಿಸಿರುತ್ತೇವೆ , ಏಕೆಂದರೆ ಸಮಾಜದ ಆರೋಗ್ಯ ನಮ್ಮ ಬಹಳ ಮುಖ್ಯವಾದಂತಹ ಕರ್ತವ್ಯ ಎಂದು ನಾವು ಭಾವಿಸುತ್ತೇವೆ. ಆದರೆ ಹೆಚ್ಚು ವಿದ್ಯಾಭ್ಯಾಸ ಇಲ್ಲದ ಗ್ರಾಮೀಣ ಹಿನ್ನೆಲೆಯುಳ್ಳ ನಮ್ಮನ್ನು ಇಲ್ಲಿಯವರೆಗೂ ಯಾರೂ ಗುರುತಿಸಿರುವುದಿಲ್ಲ .ಇಂತಹ ಸಂದರ್ಭದಲ್ಲಿ ಮಾನಸ ಸಂಸ್ಥೆ ನಮ್ಮನ್ನು ಗುರುತಿಸಿರುವುದು ಬಹಳ ಸಂತೋಷವೆನಿಸುತ್ತದೆ. ನಾವೆಲ್ಲರೂ ಗ್ರಾಮದ ಮಹಿಳೆಯರ ಮತ್ತು ಮಕ್ಕಳ ಆರೋಗ್ಯಕ್ಕೆ ಇನ್ನೂ ಹೆಚ್ಚು ಪ್ರಾಶಸ್ತ್ಯವನ್ನು ನೀಡುತ್ತೇವೆ ಎಂದು ಅವರು ತಿಳಿಸಿದರು. 

    ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ಮಾನಸ ಟ್ರಸ್ಟ್ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಕಟೀಲ್ ಅಶೋಕ್ ಪೈ ಸ್ಮಾರಕ ಪೂರಕ ಆರೋಗ್ಯ ವಿಜ್ಞಾನಗಳ ಸಂಸ್ಥೆ, ಸುಬ್ಬಯ್ಯ ಮೆಡಿಕಲ್ ಕಾಲೇಜ್ ವತಿಯಿಂದ ಕೊನೆಗವಳ್ಳಿಯ ಸೇವಾಲಾಲ್ ನಗರದಲ್ಲಿ ಮಹಿಳಾ ಆರೋಗ್ಯ ತಪಾಸಣೆ, ಹಿಮೋಗ್ಲೋಬಿನ್ ರಕ್ತ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ ,ಆರೋಗ್ಯ ಅರಿವು ಜಾಥ ಹಾಗೂ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡುವ ಕಾರ್ಯಕ್ರಮ ಎಲ್ಲವನ್ನು ಅತ್ಯಂತ ಸಂಭ್ರಮದಿಂದ ದಿನಾಂಕ 8/3 2,2025 ರಂದು ಆಚರಿಸಲಾಯಿತು. 

    ನೂರಾರು ವಿದ್ಯಾರ್ಥಿಗಳು , ಮಹಿಳೆಯರು ಈ ಜಾಥದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅತ್ಯಂತ ಅರ್ಥಪೂರ್ಣಗೊಳಿಸಿದರು .ಕಾಲೇಜಿನ ಪ್ರಾಂಶುಪಾಲರಾದ ಡಾಕ್ಟರ್ ಸಂಧ್ಯಾ ಕಾವೇರಿ ಅಧ್ಯಕ್ಷತೆಯನ್ನು ವಹಿಸಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಸಮಾನತೆಯ ಧ್ಯೇಯವನ್ನು ಅರಿಯಲು ಹಾಗೂ ಸಾಧನೆಯನ್ನು ಮಾಡಿದ ಮಹಿಳೆಯರನ್ನು ಗುರುತಿಸಲು ಆಚರಿಸಲಾಗುತ್ತಿದೆ ಎಂದು ತಿಳಿಸುತ್ತಾ ಮಾನಸ ಸಂಸ್ಥೆ ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತರನ್ನು ಗುರುತಿಸಿ ಸನ್ಮಾನಿಸುವ ಮೂಲಕ ಈ ಸಮಾಜದಲ್ಲಿ ಪ್ರತಿಯೊಬ್ಬ ಮಹಿಳೆಯು ಪ್ರಾಮುಖ್ಯತೆಯನ್ನು ಹೊಂದಿರುತ್ತಾಳೆ ಎಂಬುದನ್ನು ತೋರಿಸಿ ಕೊಡುತ್ತಿದ್ದಾರೆ ಎಂದು ತಿಳಿಸಿದರು. 

    ಕಾರ್ಯಕ್ರಮದಲ್ಲಿ ಸುಬ್ಬಯ್ಯ ಮೆಡಿಕಲ್ ಕಾಲೇಜಿನ ಡಾಕ್ಟರ್ ನಿರಂಜನ್ ,ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ಸಮಾಜ ಕಾರ್ಯದ ಮುಖ್ಯಸ್ಥರಾದ ಮಂಜುನಾಥ ಸ್ವಾಮಿ, ಉಪನ್ಯಾಸಕಿ, ನಾನ್ಸಿ ಪಿಂಟೊ, ಹಲವಾರು ವೈದ್ಯರು, ಗ್ರಾಮದ ಹಿರಿಯರಾದ ಶ್ರೀಮತಿ ಗೌರಿ ಬಾಯಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಮಾನಸಿಕ ಆರೋಗ್ಯದ ಕುರಿತು ಅರಿವು ಹಾಗೂ ಆಪ್ತ ಸಮಾಲೋಚನೆಯನ್ನು ಈ ದಿನ ನಡೆಸಲಾಯಿತು. ಕಾರ್ಯಕ್ರಮವನ್ನು ಕುಮಾರಿ ಸ್ಪೂರ್ತಿ ನಿರೂಪಿಸಿದರು ಸ್ವಾಗತವನ್ನು ಮಂಜುನಾಥ ಸ್ವಾಮಿ ತಮ್ಮ ಪ್ರಾಸ್ತಾವಿಕ ನುಡಿಗಳೊಂದಿಗೆ ನಡೆಸಿದರು ಸ್ಪರ್ಧೆಗಳನ್ನು ನಾನ್ಸಿ ಪಿಂಟೊ ನಡೆಸಿಕೊಟ್ಟರು. ಕುಮಾರಿ ಚಂದನ ಪ್ರಾರ್ಥಿಸಿ ಕುಮಾರಿ ಮಂಜುಳಾ ವಂದನಾರ್ಪಣೆಯನ್ನು ಸಲ್ಲಿಸಿದರು .

     

No comments found

LEAVE COMMENT

Your email address will not be published. Required fields are marked *

Recent Comments

Online Registration
close slider